Vijayavani 31st August 2015 - Nephro Uro and Infertility Hospital - NU Hospitals

ದೇಶ, ರಾಜ್ಯಗಳು ಪ್ರಗತಿಪಥದಲ್ಲಿ ಸಾಗುತ್ತಿವೆ. ನಗರಗಳ ವ್ಯಾಪ್ತಿ ಹಿರಿದಾಗುತ್ತಿದೆ. ವನ್ಯಪ್ರದೇಶ ಕಿರಿದಾಗುತ್ತಿದೆ. ಎಲ್ಲರೂ ಕಾಡು ಉಳಿಸಿ, ಹುಲಿ, ಆನೆ ಮೊದಲಾದ ವನ್ಯಜೀವಿ ಸಂತತಿ ಉಳಿಸಿ ಎಂದು ಅಭಿಯಾನ ನಡೆಸುತ್ತಿದ್ದಾರೆ. ಹಿಂದೆಲ್ಲ ಅರಣ್ಯ ಪ್ರದೇಶದೊಳಗೇ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನ ಕಾಡಂಚಿಗೆ ಬಂದಿದ್ದಾರೆ.

ಆದರೂ ಅವರ ಬದುಕು ಕಾಡಿನ ಸುತ್ತವೇ ಗಿರಕಿ ಹೊಡೆಯುತ್ತಿದೆ. ಆನೆ ಮತ್ತಿತರ ವನ್ಯಮೃಗಗಳು ನಾಡಿಗೆ ಇಳಿದಾಗ ಅವುಗಳನ್ನು ಪುನಾ ಕಾಡಿಗಟ್ಟಲು ಇದೇ ಸೋಲಿಗರು, ಕಾಡುಕುರುಬರೇ ಬೇಕು. ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದು ಇದುವರೆಗೆ ಸಾಧ್ಯವಾಗಿಲ್ಲ. ಅವರಿಗೆ ಅಂಥ ಬದುಕು ಕಟ್ಟುವುದರ ಬಗ್ಗೆ ಅರಿವು ಮೂಡಿಸಬೇಕೆಂದು ಯಾರಿಗೂ ಅನಿಸಲೇ ಇಲ್ಲ. ಸರ್ಕಾರ ಇವರ ಪುನರ್ವಸತಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ.

ಆದರೂ, ಅಂಥ ಹಲವು ಯೋಜನೆಗಳ ಅರಿವು ಇವರಿಗಿಲ್ಲ. ಸರ್ಕಾರ ಕೊಡುತ್ತಿರುವ ಉಚಿತ ಪಡಿತರ ಸಾಮಗ್ರಿ ಅವರ ಹೊಟ್ಟೆ ತುಂಬಿಸುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆಯೂ ಲಭ್ಯ ಇದೆ. ಇಷ್ಟರ ಮೇಲೆ ಇವರು ನಿತ್ಯ ದುಡಿಮೆ ಮೂಲಕ ಸರಾಸರಿ 100-150 ರೂಪಾಯಿ ಸಂಗ್ರಹಿಸಿದರೂ ಅದು ಕೈಯಲ್ಲಿ ಉಳಿಯುವುದಿಲ್ಲ. ಮಕ್ಕಳ ಶಿಕ್ಷಣದ ಕಡೆಗೆ ಇವರ ಗಮನವೇ ಇಲ್ಲ. ಪರಿಣಾಮ ಮಕ್ಕಳೂ ಅನಕ್ಷರಸ್ಥರಾಗಿ ಮತ್ತದೇ ಕಾಡಿಗೇ ಅಂಟಿಕೊಳ್ಳುತ್ತಾರೆ. ಭವಿಷ್ಯದ ಬಗ್ಗೆ ಅವರೂ ಗಮನಹರಿಸುವುದಿಲ್ಲ. ಹೀಗಾಗಿ ಅವರಿಗೆ ಸ್ವಾವಲಂಬಿ, ಸ್ವಾಭಿಮಾನಿ ಬದುಕು ಹೇಗೆಂಬ ಅರಿವು ಮೂಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕೆಲವು ಅಂಶಗಳ ಕಡೆಗೆ ಗಮನಹರಿಸಬಹುದು.

  • ಕಾಡಂಚಿನ ಯುವಕರಿಗೆ ಪರಿಸರ ಪ್ರವಾಸೋದ್ಯಮ ನಡೆಸುವುದು ಹೇಗೆಂಬ ತರಬೇತಿ ಒದಗಿಸುವುದು, ಅದರ ಮೂಲಕ ನಗರಗಳಿಂದ ಪ್ರವಾಸ ಹೋದವರಿಗೆ ಕಾಡಿನ ಗಿಡಮರಗಳು, ವನ್ಯಜೀವಿಗಳ ಪರಿಚಯ ಮಾಡಿಕೊಡುವುದು ಮೊದಲಾದ ಕೆಲಸಗಳಲ್ಲಿ ಅವರನ್ನು ಪರಿಣತರನ್ನಾಗಿಸಬಹುದು.
  • ಗುಡಿ ಕೈಗಾರಿಕೆಗೆ ಪ್ರಾಮುಖ್ಯತೆ ಕೊಟ್ಟು, ಮಹಿಳೆಯರಿಗೂ ತರಬೇತಿ ನೀಡಬಹುದು. ಅಲ್ಲಿನ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಗುರುತಿಸಿ ಪೂರೈಸುವ ಕೆಲಸ ಮಾಡಬೇಕು.
  • ಯುವಜನರನ್ನು ಒಂದೆಡೆ ಸೇರಿಸಿ ಸರ್ಕಾರಿ ಯೋಜನೆಗಳ ಸ್ಪಷ್ಟ ಅರಿವು ಮೂಡಿಸಬೇಕು. ಅವರು ಸ್ವಾವಲಂಬನೆಯ ಬದುಕು ಸಾಗಿಸುವುದಕ್ಕೆ ಬೇಕಾದ ಮಾರ್ಗದರ್ಶನ ನೀಡಬೇಕು.
  • ಈ ಕಾಡು ಜನರ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿಭಾವಂತರನ್ನು ಗುರುತಿಸಿ ಅವರ ಉನ್ನತ ಶಿಕ್ಷಣಕ್ಕೂ ವ್ಯವಸ್ಥೆ ಮಾಡಬೇಕು.
  • ರೆಸಾರ್ಟ್ ಮಾಲೀಕರು, ಪ್ರಸಿದ್ಧನಾಮರು, ಸಿನಿಮಾ ನಟ, ನಟಿಯರು ಮತ್ತು ಆರ್ಥಿಕವಾಗಿ ಸದೃಢರಾಗಿರುವವರು ಇಂತಹ ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಕಲಿಸುವ ಕೆಲಸ ಮಾಡಿ ಆದರ್ಶ ಮೆರೆಯಬೇಕು.

ಗ್ರಾಮಗಳ ಉತ್ಥಾನಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲು ಸರ್ಕಾರ, ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಉಪಕ್ರಮ ಸೇರಿ ಹಲವು ಸಾರ್ವಜನಿಕ ಸಹಭಾಗಿತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

  • ಯಲ್ಲಪ್ಪ ಎಂ. ಮರ್ಚೇಡ್, ಮೊಳೆಯೂರು

ಬಹುಮಾನದ ಪ್ರಾಯೋಜಕರು

ಎನ್ಯು ಹಾಸ್ಪಿಟಲ್ಸ್, ಪದ್ಮನಾಭನಗರ, ರಾಜಾಜಿನಗರ, ಬೆಂಗಳೂರು

(ಈ ಪತ್ರಕ್ಕೆ 10 ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುವುದು)

2016 © Copyright     Sitemap    

Footer All Logos
Translate »

Phone Number (required)

Call Me Back